ಆರೋಗ್ಯಕ್ಕಾಗಿ ಮಲಗಳು!

20 04 2013

ಬಹುದಿನಗಳ ನಂತರ ಬರೆಯುವ ಕಾಯಕವನ್ನು ಪುನಃ ಕೈಗೆತ್ತಿಕೊಂಡಿದ್ದೇನೆ!

ಈ ನಮ್ಮ ದೇಹವೆಂಬ ದೇಶದಲ್ಲಿ ದೋಷಗಳು ಕಾರ್ಯಾಂಗಗಳಾಗಿದ್ದರೆ, ಧಾತುಗಳು ಆಧಾರಸ್ತಂಭಗಳು. ಈಗ ನಾನು ಹೇಳಹೊರಟಿರುವುದು ಯಾರಿಗೂ ಬೇಡವಾದ (ಹಾಗೆ ನಾವು ಭಾವಿಸುವ) ಮಲಗಳ ಬಗ್ಗೆ! (ಇದ್ಯಾಕೆ ಬೇಕು ಅಂತೀರಾ?!)

ಶರೀರವನ್ನು ಮಲಿನಗೊಳಿಸುವುದರಿಂದ ’ಮಲ’ ಎನ್ನುತ್ತಾರೆ. ಪ್ರಮುಖವಾಗಿ ೩ ವಿಧದ ಮಲಗಳನ್ನು ಹೇಳಲಾಗಿದೆ. ಅವು ಪುರೀಷ (ಜೀರ್ಣಾಂಗದ ಘನ ಮಲ / ಕಕ್ಕಸು), ಮೂತ್ರ ಮತ್ತು ಸ್ವೇದ (ಬೆವರು) ಎಂದಾಗಿವೆ. ಇವಲ್ಲದೆ, ಪ್ರತಿಯೊಂದು ಧಾತುವು ರೂಪುಗೊಳ್ಳುವಾಗಲೂ ಕೆಲವು ಮಲಗಳ ಉತ್ಪತ್ತಿಯಾಗುತ್ತದೆ; ಅವು ಪ್ರತ್ಯೇಕ.

ಈ ಎಲ್ಲಾ ಮಲಗಳೂ ಶರೀರವನ್ನು ಮಲಿನಗೊಳಿಸುತ್ತವೆ. ಆದರೆ, ಅವುಗಳಿಲ್ಲದೆಯೂ ಆರೋಗ್ಯ ಮತ್ತು ಆಯಸ್ಸು ದೊರೆಯುವುದಿಲ್ಲ! ಹೇಗೆನ್ನುತ್ತೀರಾ? ಮಲಗಳು ಹೆಚ್ಚು ಅಥವಾ ಕಡಿಮೆಯಾದಾಗ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಹಾಗೂ ಅವುಗಳ ಸಮಸ್ಥಿತಿಯು ಆರೋಗ್ಯವನ್ನು ಕಾಪಾಡುತ್ತದೆ. ನಾವು ಸೇವಿಸುವ ಆಹಾರದಲ್ಲಿ ಸಾರಭಾಗವಿದ್ದಂತೆ, ಅನಗತ್ಯ ಅಥವಾ ನಮಗೆ ಪ್ರಯೋಜನವಿಲ್ಲದ ಅಂಶಗಳೂ ಇರುತ್ತವೆ. ಹಾಗೆಯೇ ಶರೀರದಲ್ಲಿ ಪಚನ ಮತ್ತು ಚಯಾಪಚಯಗಳು ನಡೆಯುವಾಗ ಅನೇಕ ಬಗೆಯ ಉಪ ಉತ್ಪನ್ನಗಳೂ ಉಂಟಾಗುತ್ತವೆ. ಇವೆಲ್ಲವೂ ಶರೀರದಿಂದ ಹೊರಬೀಳಬೇಕು ಮತ್ತು ಇವುಗಳನ್ನೇ ಮಲಗಳೆಂದು ಕರೆಯುವುದು. ಇವುಗಳ ಉತ್ಪತ್ತಿ ಕಡಿಮೆಯಾದರೆ ಪಚನ ಅಥವಾ ಚಯಾಪಚಯ ಕ್ರಿಯೆಗಳಲ್ಲಿ ತೊಂದರೆಯಾಗಿದೆಯೆಂದು ತಿಳಿಯಬಹುದು. ಹಾಗೆಯೇ ಹೆಚ್ಚಾದರೆ, ಸಾರಭಾಗದ ಉತ್ಪತ್ತಿ ಕಡಿಮೆಯಾಗಿ ಪೋಷಣೆ ಸರಿಯಾಗಿ ಆಗಲಾರದು. ಆದ್ದರಿಂದಲೇ ಹೇಳಿದ್ದು ಮಲಗಳೂ ಅತಿ ಮುಖ್ಯವೆಂದು.

ಉದಾಹರಣೆಗೆ, ಬೆವರೇ ಬಾರದಿದ್ದರೆ ಅಥವಾ ಅತಿಯಾಗಿ ಬೆವರಿದರೆ ಆಗುವ ತೊಂದರೆಗಳು, ಚರ್ಮವ್ಯಾಧಿಗಳು ಇವೆಲ್ಲ ಗೊತ್ತಿರುವಂತಹುದ್ದೇ. ಹಾಗೆಯೇ, ಅತಿ ಕಡಿಮೆ ಅಥವಾ ಹೆಚ್ಚು ಮಲ-ಮೂತ್ರಗಳ ವಿಸರ್ಜನೆಯಾದರೆ ಏನಾಗುತ್ತದೆಂದು ತಿಳಿದಿದೆ. ಹಾಗೆಯೇ ಕಿವಿಯ ಗುಗ್ಗೆ, ಕಣ್ಣಿನ ಹಿಕ್ಕು ಇತ್ಯಾದಿಗಳು ಕೂಡ (ಧಾತುಮಲಗಳು).

ಇವೆಲ್ಲ ಕಾರಣಗಳಿಂದಾಗಿಯೇ ಆಯುರ್ವೇದದಲ್ಲಿ ಆರೋಗ್ಯವೆಂದರೆ ದೋಷ-ಧಾತು-ಮಲಗಳ ಸಮಸ್ಥಿತಿಯೆಂದು ವಿವರಿಸಿದ್ದಾರೆ. ಅದರ ವಿವರಗಳನ್ನು ಮುಂದೆ ನೋಡೋಣ. ನಮಸ್ಕಾರ!

Advertisements