ಆಯುರ್ವೇದ ಅರಿವು ಮಾಲಿಕೆ-೮

4 10 2009

ವಾತದೋಷ

ಈ ಸಂಚಿಕೆಯಲ್ಲಿ ಹಿಂದೆ ಹೇಳಿದ  ’ದೋಷ’ಗಳಲ್ಲಿ ಅತಿ ಪ್ರಮುಖವಾದ ’ವಾತ’ ಅಥವಾ ’ವಾಯು’ವನ್ನು ವಿವರಿಸುತ್ತೇನೆ.

ವಾತವೆಂಬುದು ಚಲನೆ ಮತ್ತು ಗಂಧನೆ (ವಾಸನಾಗ್ರಹಣ) ಯ ದ್ಯೋತಕ. ಇದು ಸೂಚ್ಯವಾಗಿ ಕ್ರಿಯಾ ಮತ್ತು ಸಂಜ್ಞಾ ಸೂಚಕವಾಗಿದೆ. ಅಂದರೆ ನಮ್ಮ ದೇಹದಲ್ಲಿ ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳ ಗ್ರಹಣೆಗೂ, ಎಲ್ಲಾ ಬಗೆಯ ಚಲನೆಗಳಿಗೂ ಅಗತ್ಯವಾದುದೇ ’ವಾತದೋಷ’. ಇದನ್ನು ’ವಿಭು’ ಎಂದು ಬಣ್ಣಿಸಲಾಗಿದೆ. ಅಂದರೆ ವಾತವು ಎಲ್ಲೆಡೆಯಲ್ಲೂ ಇದ್ದು, ಎಲ್ಲದರ ನಿಯಂತ್ರಕವೂ ಆಗಿದೆ.

ದೋಷಗಳು ದ್ರವ್ಯರೂಪಕ್ಕಿಂತಲೂ ಕಾರ್ಯರೂಪದಲ್ಲಿ (ವಿದ್ಯುತ್ತಿನಂತೆ) ಹೆಚ್ಚಾಗಿ ಇರುವುದರಿಂದ ಅವುಗಳನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಕಲ್ಪನಾಸಾಮರ್ಥ್ಯವು ಬೇಕಾಗುತ್ತದೆ. ಉದಾ: ಸಾಮಾನ್ಯವಾಗಿ ವಾತವನ್ನು ವಿವರಿಸುವಾಗ ಶೀತಮಾರುತದ ಅಥವಾ ಮೋಡದ ಕಲ್ಪನೆ, ಪಿತ್ತಕ್ಕೆ ಆಮ್ಲಗಳ ಕಲ್ಪನೆ, ಕಫಕ್ಕೆ ಜಿಗುಟು ದ್ರವ್ಯದ (ಸಿಂಬಳದಂತ) ಕಲ್ಪನೆ ಮಾಡಬಹುದು. ಆದರೆ ಅದನ್ನೇ ಅಂತಿಮ ಎಂದುಕೊಳ್ಳುವುದು ಮಾತ್ರ ಸಲ್ಲದು. ಏಕೆಂದರೆ, ಕೆಲವು ಸಂದರ್ಭಗಳಲ್ಲಿ ಬೇರೆ ಬೇರೆಯಾಗಿ ಅವು ವರ್ತಿಸಬಹುದು.

ವಾತದ ಸಾಮಾನ್ಯ ಗುಣಗಳೆಂದರೆ ಶೀತತೆ (ತಂಪು), ರೂಕ್ಷತೆ (ಒಣ ಸ್ವಭಾವ), ಲಘುತ್ವ (ಹಗುರ), ಖರತ್ವ (ಒರಟು), ಸೂಕ್ಷ್ಮತ್ವ (ಕಣರೂಪಿ) ಮತ್ತು ಚಲತ್ವ (ಸದಾ ಚಲಿಸುವುದು). ಹಾಗಾಗಿ ವಾತದ ಪ್ರಾಧಾನ್ಯವಿದ್ದಾಗ ಈ ಗುಣಗಳ ಆಧಿಕ್ಯ ಕಂಡುಬರುತ್ತದೆ.

ವಾತವು ಪ್ರಮುಖವಾಗಿ ನಾಭಿಯ ಕೆಳಭಾಗದಲ್ಲಿ ಮೂಲವನ್ನು ಹೊಂದಿರುತ್ತದೆ. ಅಲ್ಲದೆ, ಪ್ರಮುಖವಾಗಿ ದೊಡ್ಡಕರುಳು, ಕಟಿಭಾಗ, ತೊಡೆಗಳು, ಕಿವಿಗಳು, ಮೂಳೆಗಳು ಮತ್ತು ಚರ್ಮದಲ್ಲಿ ಆಶ್ರಿತವಾಗಿರುತ್ತದೆ. ಇನ್ನೂ ಸುಲಭವಾಗಿ ಹೇಳುವುದಾದರೆ  ವಾತವು ಬಸ್ಸಿನಂತೆ ಎಲ್ಲೆಡೆಯಲ್ಲಿ ಇದ್ದು, ಚಲಿಸುತ್ತಿದ್ದರೂ ಈ ಸ್ಥಾನಗಳು ಬಸ್ ನಿಲ್ದಾಣಗಳಂತೆ ಮತ್ತು ನಾಭಿಯ ಕೆಳಭಾಗ ಅಥವಾ ದೊಡ್ಡಕರುಳೆಂಬುದು ಬಸ್ ಡಿಪೊ ಇದ್ದಂತೆ. 🙂

ವಾತವು ಪ್ರಾಣ, ಉದಾನ, ವ್ಯಾನ, ಸಮಾನ ಮತ್ತು ಅಪಾನ ವಾತಗಳೆಂದು ೫ ಬಗೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರತಿಯೊಂದಕ್ಕೂ ಅದರದ್ದೇ ಆದ ಸ್ಥಾನ, ಕಾರ್ಯಗಳು ಇವೆ. ಅವುಗಳನ್ನೆಲ್ಲ ವಿವರಿಸುವುದು ಅನಗತ್ಯ ಗೊಂದಲಗಳನ್ನುಂಟು ಮಾಡಬಹುದು ಮತ್ತು ಅತಿ ವಿಸ್ತೃತವಾಗಬಹುದೆಂದು ಇಲ್ಲಿ ಹೇಳುತ್ತಿಲ್ಲ.

ವಾತದ ಕೆಲವು ಕೆಲಸಗಳನ್ನು ಹೇಳುವುದಾದರೆ, ಉಸಿರಾಟದ ನಿಯಂತ್ರಣ, ಜೀರ್ಣಾಂಗಗಳ ಚಲನೆ, ಸಂಜ್ಞೆಗಳ ಗ್ರಹಿಕೆ, ಮಲ ವಿಸರ್ಜನೆ, ಶಿಶುವಿನ ಜನನಕ್ರಿಯೆ, ಅಂಗವ್ಯೂಹಗಳ ನಿಯಂತ್ರಣ ಮತ್ತು ಸಂಯೋಜನೆ, ಮಾಂಸಖಂಡಗಳ ಸಂಯೋಜಿತ ಚಲನೆ ಹೀಗೆ ಹತ್ತು ಹಲವು.

ವಾತವು ಅತಿಯಾಗಿ ಹೆಚ್ಚಾದರೆ (ಪ್ರಕೋಪ) ದೌರ್ಬಲ್ಯ, ಚರ್ಮದ/ಅಂಗಾಂಗಗಳ ಒಣಗುವಿಕೆ, ವಿಕೃತ ಚಲನೆ (ಅಪಸ್ಮಾರದಂತೆ), ವಿವಿಧ ನೋವುಗಳು, ಕೃಶತ್ವ, ಶರೀರದ ಕಪ್ಪಾಗುವಿಕೆ, ಉಷ್ಣದ ಬಯಕೆ, ಹೊಟ್ಟೆ ಉಬ್ಬರ, ಮಲಬದ್ಧತೆ, ನಿದ್ರಾಹೀನತೆ, ಪ್ರಲಾಪ (ಅರ್ಥರಹಿತ ಮಾತುಗಳು), ತಲೆತಿರುಗುವಿಕೆ ಇತ್ಯಾದಿಗಳು ಕಂಡುಬರುತ್ತವೆ.

ವಾತವು ತುಂಬಾ ಕಡಿಮೆಯಾದರೆ ಮೈಭಾರ, ಮಾತು ಕಡಿಮೆಯಾಗುವಿಕೆ, ಸಂಜ್ಞಾಗ್ರಹಿಕೆಯ ಕಡಿಮೆಯಾಗುವಿಕೆ ಇತ್ಯಾದಿಗಳು ಕಂಡುಬರುತ್ತವೆ. ಸಾಮಾನ್ಯವಾಗಿ ವಾತ ಮತ್ತು ಕಫಗಳು ಒಂದಕ್ಕೊಂದು ವಿರುದ್ಧವಾಗಿ ವರ್ತಿಸುತ್ತವೆ.

ಒಂದು ಚಿಕ್ಕ ಉದಾಹರಣೆ ಕೊಡುವುದಾದರೆ, ವಾತವು ಸರಿಯಾಗಿ (ಪ್ರಾಕೃತವಾಗಿ) ಇರುವಾಗ ಮಾಂಸಖಂಡಗಳು ಸರಿಯಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಆಕೃತಿಯನ್ನು ಹೊಂದಿರುತ್ತವೆ. ಆದರೆ ಅತಿಯಾಗಿ ಕುಪಿತಗೊಂಡಾಗ ಅಪಸ್ಮಾರದಂತಹ ಚಲನೆ ಅಥವಾ ಮಾಂಸಖಂಡಗಳ ಕೃಶತ್ವ ಕಂಡುಬರಬಹುದು. ಹಾಗೆಯೇ ವಾತವು ಕಡಿಮೆಯಾದಾಗ ಕುಂಠಿತ ಚಲನೆಯುಂಟಾಗಬಹುದು ಅಥವಾ ಚಲನೆಯೇ ಇಲ್ಲದಾಗಬಹುದು.

ಹೀಗೆಯೇ ಮುಂದಿನ ಸಂಚಿಕೆಯಲ್ಲಿ ಪಿತ್ತವನ್ನು ತಿಳಿದುಕೊಳ್ಳೋಣ. ನಮಸ್ಕಾರ.

Advertisements

Actions

Information

One response

15 06 2012
Bunny

Hi…
Thumba chennagi vivarisiddiri…
Dhanyavadagalu vaidyare

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
%d bloggers like this: