ಮುನ್ನುಡಿ

24 08 2009

ಆರೋಗ್ಯ, ಯಾರಿಗೆ ಬೇಡ? ಅದರಲ್ಲೂ ಉತ್ತಮ ಆರೋಗ್ಯ! ಅದಕ್ಕಾಗಿ ಈ ಒಂದು ಪ್ರಯತ್ನ, ಎಲ್ಲರಿಗಾಗಿ, ಎಲ್ಲರ ಒಳಿತಿಗಾಗಿ.

ಉತ್ತಮ ಆರೋಗ್ಯ ಎಂದರೆ ಏನು? ಖಾಯಿಲೆಗಳಿಲ್ಲದಿರುವುದು ಅಷ್ಟೆಯೇ? ಅದು ಆರೋಗ್ಯದ ಒಂದುಭಾಗವಷ್ಟೇ. ಆಯುರ್ವೇದದಲ್ಲಿ “ದೋಷ, ಅಗ್ನಿ, ಧಾತು, ಮಲ ಮತ್ತು ಎಲ್ಲ ಕ್ರಿಯೆಗಳ ಸಾಮ್ಯತೆಯೊಡನೆ ಪ್ರಸನ್ನವಾದ ಆತ್ಮಾ, ಇಂದ್ರಿಯಗಳು ಮತ್ತು ಮನಸ್ಸು ಇದ್ದರೆ ಅದನ್ನು ಸ್ವಾಸ್ಥ್ಯ” ಎಂದು ವಿವರಿಸಿದ್ದಾರೆ. ಇಲ್ಲಿ ಹೇಳಿದ ಪ್ರತಿಯೊಂದು ಅಂಶಗಳನ್ನೂ ಮುಂದಿನ ದಿನಗಳಲ್ಲಿ ವಿವರಿಸುತ್ತೇನೆ. ಏಕೆಂದರೆ ಇವುಗಳು ತುಂಬಾ ವಿಸ್ತಾರವಿರುವ ಮತ್ತು ಗಹನವಾದ ವಿಚಾರಗಳು.

ಆದರೂ ಸದ್ಯಕ್ಕೆ ಸುಲಭವಾಗಿ ಅರ್ಥವಾಗಲು ಹೇಳುವುದಾದರೆ “ಎಲ್ಲಾ ಶಾರೀರಿಕ ಮತ್ತು ಮಾನಸಿಕ ಕ್ರಿಯೆಗಳು ಸರಿಯಾಗಿ, ಕಾಲಕಾಲಕ್ಕೆ ಆಗುತ್ತಿದ್ದು, ಮನಸ್ಸು ಉಲ್ಲಸಿತವಾಗಿದ್ದು, ವಿವೇಚನೆ-ಬುದ್ಧಿಗಳು ಸರಿಯಾಗಿ ವರ್ತಿಸುತ್ತಿದ್ದರೆ ಅದು ಉತ್ತಮ ಆರೋಗ್ಯ” ಎನ್ನಬಹುದು. ಇಲ್ಲಿ ದೈಹಿಕ, ಮಾನಸಿಕ, ಆಧ್ಯಾತ್ಮಿಕ (ತನ್ನ ಬಗೆಗಿನ ಅರಿವು) ಹಾಗೂ ಸಾಮಾಜಿಕ (ತನ್ನ ಸುತ್ತಲಿನ ಪರಿವೆ ಹಾಗೂ ಅದಕ್ಕೆ ತಕ್ಕ ವರ್ತನೆ) ಆರೋಗ್ಯವೂ ಒಟ್ಟಾಗಿ ಹೇಳಲ್ಪಟ್ಟಿವೆ. ಹಾಗಾಗಿಯೇ ಆಯುರ್ವೇದವನ್ನು ’ಪರಿಪೂರ್ಣ ಚಿಕಿತ್ಸಾ ವಿಧಾನ’ ಎನ್ನಲಾಗಿದೆ.

ಮುಂದಿನ ಬರಹಗಳಲ್ಲಿ ಆಯುರ್ವೇದದಲ್ಲಿ ಹೇಳಿದ ಒಂದೊಂದೇ ವಿಚಾರಗಳನ್ನೂ ನನಗೆ ತಿಳಿದಷ್ಟು ವಿವರಿಸಲು ಪ್ರಯತ್ನಿಸುತ್ತೇನೆ. ನಿಮ್ಮ ಸಹಕಾರ, ಪ್ರೋತ್ಸಾಹ, ಸಲಹೆಗಳು ಇದನ್ನು ಇನ್ನೂ ಉತ್ತಮ ಪಡಿಸಲು ಸಹಾಯ ಮಾಡುತ್ತವೆ. ಅವನ್ನು ನಿಮ್ಮಿಂದ ಬಯಸಬಹುದಲ್ಲವೇ?

ವಿ.ಸೂ: ಈ ವೇದಿಕೆಯು ಮುಕ್ತ ಹಾಗೂ ಆರೋಗ್ಯಕರ ಚರ್ಚೆಗೆ ತೆರೆದಿದೆ. ಹಾಗಾಗಿ ಸಲಹೆಗಳು, ಪ್ರಶ್ನೆಗಳು ಇತ್ಯಾದಿಗಳಿದ್ದಲ್ಲಿ ದಯವಿಟ್ಟು ’ಕಮೆಂಟಿಸಿ’. ಉತ್ತರಿಸುವ ಪ್ರಯತ್ನ ಮಾಡುತ್ತೇನೆ.

ಬನ್ನಿ…ಬರುತ್ತಿರಿ.

ಧನ್ಯವಾದಗಳು 🙂

Advertisements
ಆರೋಗ್ಯಕ್ಕಾಗಿ ಮಲಗಳು!

20 04 2013

ಬಹುದಿನಗಳ ನಂತರ ಬರೆಯುವ ಕಾಯಕವನ್ನು ಪುನಃ ಕೈಗೆತ್ತಿಕೊಂಡಿದ್ದೇನೆ!

ಈ ನಮ್ಮ ದೇಹವೆಂಬ ದೇಶದಲ್ಲಿ ದೋಷಗಳು ಕಾರ್ಯಾಂಗಗಳಾಗಿದ್ದರೆ, ಧಾತುಗಳು ಆಧಾರಸ್ತಂಭಗಳು. ಈಗ ನಾನು ಹೇಳಹೊರಟಿರುವುದು ಯಾರಿಗೂ ಬೇಡವಾದ (ಹಾಗೆ ನಾವು ಭಾವಿಸುವ) ಮಲಗಳ ಬಗ್ಗೆ! (ಇದ್ಯಾಕೆ ಬೇಕು ಅಂತೀರಾ?!)

ಶರೀರವನ್ನು ಮಲಿನಗೊಳಿಸುವುದರಿಂದ ’ಮಲ’ ಎನ್ನುತ್ತಾರೆ. ಪ್ರಮುಖವಾಗಿ ೩ ವಿಧದ ಮಲಗಳನ್ನು ಹೇಳಲಾಗಿದೆ. ಅವು ಪುರೀಷ (ಜೀರ್ಣಾಂಗದ ಘನ ಮಲ / ಕಕ್ಕಸು), ಮೂತ್ರ ಮತ್ತು ಸ್ವೇದ (ಬೆವರು) ಎಂದಾಗಿವೆ. ಇವಲ್ಲದೆ, ಪ್ರತಿಯೊಂದು ಧಾತುವು ರೂಪುಗೊಳ್ಳುವಾಗಲೂ ಕೆಲವು ಮಲಗಳ ಉತ್ಪತ್ತಿಯಾಗುತ್ತದೆ; ಅವು ಪ್ರತ್ಯೇಕ.

ಈ ಎಲ್ಲಾ ಮಲಗಳೂ ಶರೀರವನ್ನು ಮಲಿನಗೊಳಿಸುತ್ತವೆ. ಆದರೆ, ಅವುಗಳಿಲ್ಲದೆಯೂ ಆರೋಗ್ಯ ಮತ್ತು ಆಯಸ್ಸು ದೊರೆಯುವುದಿಲ್ಲ! ಹೇಗೆನ್ನುತ್ತೀರಾ? ಮಲಗಳು ಹೆಚ್ಚು ಅಥವಾ ಕಡಿಮೆಯಾದಾಗ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಹಾಗೂ ಅವುಗಳ ಸಮಸ್ಥಿತಿಯು ಆರೋಗ್ಯವನ್ನು ಕಾಪಾಡುತ್ತದೆ. ನಾವು ಸೇವಿಸುವ ಆಹಾರದಲ್ಲಿ ಸಾರಭಾಗವಿದ್ದಂತೆ, ಅನಗತ್ಯ ಅಥವಾ ನಮಗೆ ಪ್ರಯೋಜನವಿಲ್ಲದ ಅಂಶಗಳೂ ಇರುತ್ತವೆ. ಹಾಗೆಯೇ ಶರೀರದಲ್ಲಿ ಪಚನ ಮತ್ತು ಚಯಾಪಚಯಗಳು ನಡೆಯುವಾಗ ಅನೇಕ ಬಗೆಯ ಉಪ ಉತ್ಪನ್ನಗಳೂ ಉಂಟಾಗುತ್ತವೆ. ಇವೆಲ್ಲವೂ ಶರೀರದಿಂದ ಹೊರಬೀಳಬೇಕು ಮತ್ತು ಇವುಗಳನ್ನೇ ಮಲಗಳೆಂದು ಕರೆಯುವುದು. ಇವುಗಳ ಉತ್ಪತ್ತಿ ಕಡಿಮೆಯಾದರೆ ಪಚನ ಅಥವಾ ಚಯಾಪಚಯ ಕ್ರಿಯೆಗಳಲ್ಲಿ ತೊಂದರೆಯಾಗಿದೆಯೆಂದು ತಿಳಿಯಬಹುದು. ಹಾಗೆಯೇ ಹೆಚ್ಚಾದರೆ, ಸಾರಭಾಗದ ಉತ್ಪತ್ತಿ ಕಡಿಮೆಯಾಗಿ ಪೋಷಣೆ ಸರಿಯಾಗಿ ಆಗಲಾರದು. ಆದ್ದರಿಂದಲೇ ಹೇಳಿದ್ದು ಮಲಗಳೂ ಅತಿ ಮುಖ್ಯವೆಂದು.

ಉದಾಹರಣೆಗೆ, ಬೆವರೇ ಬಾರದಿದ್ದರೆ ಅಥವಾ ಅತಿಯಾಗಿ ಬೆವರಿದರೆ ಆಗುವ ತೊಂದರೆಗಳು, ಚರ್ಮವ್ಯಾಧಿಗಳು ಇವೆಲ್ಲ ಗೊತ್ತಿರುವಂತಹುದ್ದೇ. ಹಾಗೆಯೇ, ಅತಿ ಕಡಿಮೆ ಅಥವಾ ಹೆಚ್ಚು ಮಲ-ಮೂತ್ರಗಳ ವಿಸರ್ಜನೆಯಾದರೆ ಏನಾಗುತ್ತದೆಂದು ತಿಳಿದಿದೆ. ಹಾಗೆಯೇ ಕಿವಿಯ ಗುಗ್ಗೆ, ಕಣ್ಣಿನ ಹಿಕ್ಕು ಇತ್ಯಾದಿಗಳು ಕೂಡ (ಧಾತುಮಲಗಳು).

ಇವೆಲ್ಲ ಕಾರಣಗಳಿಂದಾಗಿಯೇ ಆಯುರ್ವೇದದಲ್ಲಿ ಆರೋಗ್ಯವೆಂದರೆ ದೋಷ-ಧಾತು-ಮಲಗಳ ಸಮಸ್ಥಿತಿಯೆಂದು ವಿವರಿಸಿದ್ದಾರೆ. ಅದರ ವಿವರಗಳನ್ನು ಮುಂದೆ ನೋಡೋಣ. ನಮಸ್ಕಾರ!

My blog review of the year 2012

2 01 2013

ನನ್ನೆಲ್ಲ ಓದುಗ ಮಿತ್ರರಿಗೂ ಹೊಸವರ್ಷದ ನನ್ನ ನಲ್ಮೆಯ ಶುಭಾಶಯಗಳು…!

 

೨೦೧೨ ಹೇಗಿತ್ತು ಅಂತ ಒಂದು ಹಿನ್ನೋಟವನ್ನು ಈ ಕೆಳಗೆ WordPress ಕೊಟ್ಟಿದೆ…

The WordPress.com stats helper monkeys prepared a 2012 annual report for this blog.

Here’s an excerpt:

600 people reached the top of Mt. Everest in 2012. This blog got about 3,400 views in 2012. If every person who reached the top of Mt. Everest viewed this blog, it would have taken 6 years to get that many views.

Click here to see the complete report.

ಆಯುರ್ವೇದ ಅರಿವು ಮಾಲಿಕೆ – ೧೧

8 01 2011

ಶರೀರದ ಇರುವಿಕೆಗೆ “ಸಪ್ತ ಧಾತುಗಳು”

ದೇಹ ಅಥವಾ ಶರೀರ ಎಂಬ ಮೂರ್ತ ಸ್ವರೂಪವು ೭ ಬಗೆಯ ಮೂಲ ಧಾತುಗಳಿಂದಾಗಿ ಆಗಿದೆ. “ಧರಿಸುವ” ಮತ್ತು “ಪೋಷಿಸುವ” ಸಾಮರ್ಥ್ಯವಿರುವುದನ್ನು ಧಾತು ಎನ್ನುತ್ತಾರೆ.

ಮನೆಯಾಗಲು ಇಟ್ಟಿಗೆ, ಸಿಮೆಂಟ್, ಕಲ್ಲು, ಮರ ಇತ್ಯಾದಿಗಳು ಹೇಗೆಯೋ, ಹಾಗೆ ಈ ಶರೀರವೆಂಬ ಮನೆಗೆ ಸಪ್ತ ಧಾತುಗಳು ಅಗತ್ಯ. ಸಪ್ತ ಅಂದರೆ ೭, ಕ್ರಮವಾಗಿ ರಸಧಾತು, ರಕ್ತಧಾತು, ಮಾಂಸಧಾತು, ಮೇದಧಾತು, ಅಸ್ಥಿಧಾತು, ಮಜ್ಜಾಧಾತು ಹಾಗೂ ಶುಕ್ರಧಾತು ಎನ್ನಲಾಗಿದೆ.

 ಗಮನಿಸಿ: ಕೆಲವೊಂದು ಸಂದರ್ಭಗಳಲ್ಲಿ ಶರೀರದ ಧಾರಣೆಯ ಕೆಲಸ ಮಾಡುತ್ತಿರುವಾಗ ದೋಷಗಳನ್ನೂ ಧಾತುಗಳೆನ್ನಲಾಗುತ್ತದೆ, ಕಾರ್ಯಸೂಚಕವಾಗಿ!

 ೧. ರಸಧಾತು: ಶರೀರದಲ್ಲಿ ದ್ರವಸ್ವರೂಪದಲ್ಲಿದ್ದು, ಪೋಷಣೆಯ ಕೆಲಸ ಮಾಡುವ ಆಹಾರದ ಸಾರಭಾಗದ ಪರಿಣಾಮದಿಂದ ಉಂಟಾಗುವ ದುಗ್ಧರಸ ಇತ್ಯಾದಿ.

೨. ರಕ್ತಧಾತು: ರಕ್ತವರ್ಣವಿರುವ ದ್ರವ. ರಕ್ತಕಣಗಳು.

೩. ಮಾಂಸಧಾತು: ಮೃದುವಾದ ಮತ್ತು ಶರೀರವನ್ನು ತುಂಬಿಸುವ ಮಾಂಸಪೇಶಿಗಳು ಇತ್ಯಾದಿ.

೪. ಮೇದೋಧಾತು: ಕೊಬ್ಬಿನಂಶ, ಮೇದಸ್ಸು. ಸ್ನಿಗ್ಧತೆಯನ್ನು ನೀಡುತ್ತದೆ.

೫. ಅಸ್ಥಿಧಾತು: ಆಕಾರ ಮತ್ತು ಆಧಾರ ಕೊಡುವ ಮೂಳೆ ಇತ್ಯಾದಿ.

೬. ಮಜ್ಜಾಧಾತು: ಮೂಳೆಗಳನ್ನು ತುಂಬುವ ಮಜ್ಜೆ. ದೇಹಕ್ಕೆ ಬಲ ನೀಡುತ್ತದೆ.

೭. ಶುಕ್ರಧಾತು: ಪ್ರಜನನಕ್ಕೆ ಅಗತ್ಯವಾದ ವೀರ್ಯ, ಅಂತಃಸ್ರಾವಗಳು ಇತ್ಯಾದಿ.

 ಈ ಪ್ರತಿಯೊಂದು ಧಾತುವಿಗೂ ಅದರದ್ದೇ ಆದ ಸ್ಥಾನ, ಪ್ರಮಾಣ ಮತ್ತು ಕಾರ್ಯವಿರುತ್ತದೆ. ಅವುಗಳಲ್ಲಿ ಏರುಪೇರಾದರೆ ಖಾಯಿಲೆಗಳು ಉಂಟಾಗುತ್ತವೆ. ದೋಷಗಳು ಧಾತುಗಳಲ್ಲಿ ಸೇರಿ ವಿವಿಧ ರೋಗಗಳನ್ನು ಉಂಟುಮಾಡಬಲ್ಲವು.

 ಮೇಲೆ ಹೇಳಿದ ಕ್ರಮದಲ್ಲಿ ಪ್ರತಿಯೊಂದು ಧಾತುವೂ ತನಗೆ ಬೇಕಾದ ಪೋಷಣೆಯನ್ನು ತನ್ನ ಹಿಂದಿನ ಧಾತುವಿನಿಂದ ಪಡೆಯುತ್ತದೆ. ಅಂದರೆ, ಆಹಾರ > ಆಹಾರರಸ > ರಸ > ರಕ್ತ > ಮಾಂಸ >>>>ಶುಕ್ರ ಹೀಗೆ. ಎಲ್ಲದರ ಕೊನೆಯಲ್ಲಿ, ಅವೆಲ್ಲದರ ಸಾರವಾದ “ಓಜಸ್ಸು” ನಿರ್ಮಾಣಗೊಳ್ಳುತ್ತದೆ. ಇದುವೇ ವ್ಯಕ್ತಿಯ ಆರೋಗ್ಯ, ಬದುಕು ಮತ್ತು ಸಾವಿಗೆ ಕಾರಣ. ಉತ್ತಮ ಓಜಸ್ಸೆಂದರೆ ಉತ್ತಮ ಆರೋಗ್ಯ. ಆದ್ದರಿಂದಲೇ ನಾವು ಸೇವಿಸುವ ಆಹಾರವು ಉತ್ತಮವಾಗಿರಬೇಕಾದ್ದು ಅತಿ ಮುಖ್ಯ.

ಆಯುರ್ವೇದ ಅರಿವು ಮಾಲಿಕೆ – ೧೦

5 12 2009
ಕಫದೋಷ
 
ಜಲದಿಂದ ಉಂಟಾದದ್ದು ಕಫವು. ಹಾಗಾಗಿ ಬಂಧನ, ಬಲ, ತರ್ಪಣ, ನುಣುಪು ಇತ್ಯಾದಿಗಳಿಗೆ ಇದೇ ಕಾರಣ. 
ಕಫದ ಸಾಮಾನ್ಯ ಗುಣಗಳೆಂದರೆ ಸ್ನಿಗ್ಧತೆ, ಅಂಟುವಿಕೆ, ಗುರುತ್ವ / ಭಾರ, ಮಂದತೆ, ಶೀತಗುಣ, ಜಾರುವಿಕೆ ಇತ್ಯಾದಿ.
ಇದು ಮುಖ್ಯವಾಗಿ ಎದೆಯ ಭಾಗದಲ್ಲಿ ಮೂಲವನ್ನು ಹೊಂದಿದ್ದು ಸಂದುಗಳು, ಜಠರ, ನಾಲಿಗೆ, ಶಿರಸ್ಸು ಇತ್ಯಾದಿ ಪ್ರಮುಖ ಸ್ಥಾನಗಳಲ್ಲಿ ಚಲಿಸುತ್ತದೆ.
ಕಫವನ್ನು ತರ್ಪಕ, ಅವಲಂಬಕ, ಬೋಧಕ, ಕ್ಲೇದಕ ಮತ್ತು ಶ್ಲೇಷಕ ಕಫವೆಂದು ಕರ್ಮ-ಸ್ಥಾನಗಳಿಗನುಗುಣವಾಗಿ ವಿಂಗಡಿಸುತ್ತಾರೆ. ತರ್ಪಕವು ಮೆದುಳನ್ನು ರಕ್ಷಿಸಿ ಪೋಷಿಸಿದರೆ, ಅವಲಂಬಕವು ಹೃದಯವನ್ನು ರಕ್ಷಿಸುತ್ತದೆ. ಬೋಧಕವು ರುಚಿಯನ್ನು ಗ್ರಹಿಸಿದರೆ, ಕ್ಲೇದಕವು ಆಹಾರ ಪಚನಕ್ಕೆ ಸಹಾಯ ಮಾಡುತ್ತದೆ ಮತ್ತು ಶ್ಲೇಷಕವು ನಮ್ಮ ಸಂದುಗಳಲ್ಲಿ ಜಾರುವ ದ್ರವದಂತೆ ಇದ್ದು ಚಲನೆಗೆ ಸಹಾಯ ಮಾಡುತ್ತದೆ.
ಕಫವು ಅತಿಯಾದಾಗ ದೇಹಭಾರವಾಗುವುದು, ಜಡತ್ವ, ಹಸಿವು ಮಂದವಾಗುವುದು, ನಿದ್ರೆ ಅತಿಯಾಗುವುದು, ಆಯಾಸ, ದೇಹದಲ್ಲಿ ನೀರು ಮತ್ತು ಕೊಬ್ಬಿನ ಶೇಖರಣೆ, ಮೈ ಬಿಳಿಚಿಕೊಳ್ಳುವುದು, ವಾಂತಿ ಇತ್ಯಾದಿಗಳು ಕಂಡುಬರಬಹುದು. ಹಾಗೆಯೇ ಕಡಿಮೆಯಾದರೆ ವಾತವು ಜಾಸ್ತಿಯಾದ ಲಕ್ಷಣಗಳು ಕಂಡುಬರುತ್ತವೆ.
ಯಾರಿಗಾದರೂ “ಕೊಬ್ಬು” ಜಾಸ್ತಿಯಿದ್ದರೆ ಬಯ್ಯಬೇಡಿ ಅವರನ್ನು, ಅದು ಅವರ ತಪ್ಪಲ್ಲ…ಕಫದ್ದು ! ( ಕಫ ಜಾಸ್ತಿಯಾಗುವಂತೆ ಮಾಡಿಕೊಂಡದ್ದಕ್ಕೆ ಬೈಯಿರಿ ತೊಂದರೆಯಿಲ್ಲ 🙂 )
ಆಯುರ್ವೇದ ಅರಿವು ಮಾಲಿಕೆ- ೯

19 10 2009

ಪಿತ್ತದೋಷ

ಪಿತ್ತವು ತಪನೆಯ ಅಂದರೆ ’ಬಿಸಿ’ಯ (ದಹಿಸುವ) ಕಾರಣ. ಆದ್ದರಿಂದ ದೇಹದಲ್ಲಿ ಶಾಖ, ಪರಿವರ್ತನೆಗಳು ಮುಂತಾದ ಚಯಾಪಚಯ ಕ್ರಿಯೆಗಳಿಗೆಲ್ಲ ಇದು ಬೇಕು ಅಥವಾ ಇದುವೇ ಕಾರಣ. ಹಾಗೆಯೇ ದೃಷ್ಟಿಗೆ, ರಕ್ತದ ಬಣ್ಣಕ್ಕೆ, ಬುದ್ಧಿಶಕ್ತಿಗೆ, ಜೀರ್ಣಕ್ರಿಯೆಗೆ ಹೀಗೆ ಅನೇಕ ಕಾರ್ಯಗಳಿಗೆ ಇದು ಬೇಕು.

ಪಿತ್ತದ ಸಾಮಾನ್ಯ ಗುಣಗಳೆಂದರೆ ಸ್ನಿಗ್ಧತೆ (ಕಫಕ್ಕಿಂತ ಕಡಿಮೆ), ಉಷ್ಣತೆ, ದ್ರವತ್ವ, ಚಲಿಸುವಿಕೆ (ದ್ರವದಂತೆ, ವಾತದಷ್ಟಲ್ಲ), ಉಗ್ರಗಂಧ, ತೀಕ್ಷ್ಣತೆ, ಲಘುತ್ವ (ವಾತಕ್ಕಿಂತ ಭಾರ) ಇತ್ಯಾದಿ.

ಪಿತ್ತವು ನಾಭಿಯ ಸುತ್ತಲೂ ಮೂಲವನ್ನು ಹೊಂದಿದ್ದು, ಚರ್ಮ, ಕಣ್ಣು, ಹೃದಯ, ಪಿತ್ತಜನಕಾಂಗ ಮುಂತಾದ ಕಡೆಗಳಲ್ಲಿ ಪ್ರಮುಖವಾಗಿ ವಾಸವಾಗಿರುತ್ತದೆ. ಜಠರದ ಕೆಳಭಾಗವು ಮುಖ್ಯಸ್ಥಾನವೆಂದು ಬಣ್ಣಿಸಲ್ಪಟ್ಟಿದೆ.

ಪಿತ್ತವು ಪಾಚಕ, ರಂಜಕ, ಭ್ರಾಜಕ, ಸಾಧಕ ಮತ್ತು ಆಲೋಚಕ ಪಿತ್ತಗಳಾಗಿ ಕಾರ್ಯನಿರ್ವಹಿಸುತ್ತದೆ. ಜೀರ್ಣಕ್ರಿಯೆ, ದೇಹದ ಉಷ್ಣತೆಯ ನಿಯಂತ್ರಣ, ಚರ್ಮಕ್ಕೆ ಹಚ್ಚಿದ ದ್ರವ್ಯಗಳ ಪಾಚನೆ, ರಕ್ತದ ಉತ್ಪತ್ತಿ, ಯೋಚನಾ ಸಾಮರ್ಥ್ಯ, ಧೈರ್ಯ, ರೂಪ ಗ್ರಹಣೆ ಹೀಗೆ ಅನೇಕ ಕಾರ್ಯಗಳನ್ನು ನಿರ್ವಹಿಸುತ್ತದೆ.

ಪಿತ್ತವು ಅತಿಯಾದರೆ ದೇಹದ ಉಷ್ಣತೆಯ ಏರಿಕೆ, ಅಂಗಾಂಗಗಳ ಹಳದಿಗಟ್ಟುವಿಕೆ, ಅತಿಸಾರ, ಅಧಿಕ ಹಸಿವು, ಅಧಿಕ ಬಾಯಾರಿಕೆ, ದೇಹದಲ್ಲಿ ಉರಿ, ನಿದ್ರಾಹಾನಿ ಇತ್ಯಾದಿಗಳುಂತಾಗುತ್ತವೆ. ಹಾಗೆಯೇ ಅಲ್ಪತೆಯಾದರೆ ದೇಹದ ಶೀತತೆ, ಹಸಿವಿಲ್ಲದಿರುವಿಕೆ, ಪೇಲವತೆ ಇತ್ಯಾದಿಗಳಿರುತ್ತವೆ.

ಸಾಮಾನ್ಯವಾಗಿ ಭಾರತದ ಮನೆಗಳಲ್ಲಿ ಪಿತ್ತದ ಬಗ್ಗೆ ಅರಿವು ಇರುತ್ತದೆ. ಮನೆಯ ಹಿರಿಯರು ಕೆಲವು ಬಾರಿ ’ಪಿತ್ತ ಜಾಸ್ತಿಯಾಗಿದೆ / ನೆತ್ತಿಗೇರಿದೆ’ ಇತ್ಯಾದಿಗಳನ್ನು ಹೇಳುವುದನ್ನು ಕೇಳಿರಬಹುದು. ಹಲವು ಸಲ ಅದು ಸರಿಯಾಗಿರುತ್ತದೆ. ನಮ್ಮ ದೇಹದಲ್ಲಿ ನಾನು ವಿವರಿಸಿದ ಲಕ್ಷಣಗಳು ಇತ್ಯಾದಿಗಳನ್ನು ಗಮನಿಸಲು ಆರಂಭಿಸಿದರೆ ನಿಧಾನಕ್ಕೆ ಇವುಗಳ ಸತ್ಯತೆ ಮತ್ತು ಮಹತ್ತ್ವದ ಅರಿವು ಹೆಚ್ಚುತ್ತದೆ. ಮುಂದೆ ಕಫದೋಷದ ಬಗ್ಗೆ ತಿಳಿಯೋಣ, ನಮಸ್ಕಾರ.

[ಹಲವು ಕೆಲಸದ ಒತ್ತಡದಿಂದಾಗಿ ನನ್ನ ಬರವಣಿಗೆ ತಡವಾಗುತ್ತಿದೆ, ಕ್ಷಮಿಸಿ. ಸಾಧ್ಯವಾದಷ್ಟೂ ನಿಯಮಿತವಾಗಿರಲು ಪ್ರಯತ್ನಿಸುತ್ತೇನೆ. 🙂  ]

ಆಯುರ್ವೇದ ಅರಿವು ಮಾಲಿಕೆ-೮

4 10 2009

ವಾತದೋಷ

ಈ ಸಂಚಿಕೆಯಲ್ಲಿ ಹಿಂದೆ ಹೇಳಿದ  ’ದೋಷ’ಗಳಲ್ಲಿ ಅತಿ ಪ್ರಮುಖವಾದ ’ವಾತ’ ಅಥವಾ ’ವಾಯು’ವನ್ನು ವಿವರಿಸುತ್ತೇನೆ.

ವಾತವೆಂಬುದು ಚಲನೆ ಮತ್ತು ಗಂಧನೆ (ವಾಸನಾಗ್ರಹಣ) ಯ ದ್ಯೋತಕ. ಇದು ಸೂಚ್ಯವಾಗಿ ಕ್ರಿಯಾ ಮತ್ತು ಸಂಜ್ಞಾ ಸೂಚಕವಾಗಿದೆ. ಅಂದರೆ ನಮ್ಮ ದೇಹದಲ್ಲಿ ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳ ಗ್ರಹಣೆಗೂ, ಎಲ್ಲಾ ಬಗೆಯ ಚಲನೆಗಳಿಗೂ ಅಗತ್ಯವಾದುದೇ ’ವಾತದೋಷ’. ಇದನ್ನು ’ವಿಭು’ ಎಂದು ಬಣ್ಣಿಸಲಾಗಿದೆ. ಅಂದರೆ ವಾತವು ಎಲ್ಲೆಡೆಯಲ್ಲೂ ಇದ್ದು, ಎಲ್ಲದರ ನಿಯಂತ್ರಕವೂ ಆಗಿದೆ.

ದೋಷಗಳು ದ್ರವ್ಯರೂಪಕ್ಕಿಂತಲೂ ಕಾರ್ಯರೂಪದಲ್ಲಿ (ವಿದ್ಯುತ್ತಿನಂತೆ) ಹೆಚ್ಚಾಗಿ ಇರುವುದರಿಂದ ಅವುಗಳನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಕಲ್ಪನಾಸಾಮರ್ಥ್ಯವು ಬೇಕಾಗುತ್ತದೆ. ಉದಾ: ಸಾಮಾನ್ಯವಾಗಿ ವಾತವನ್ನು ವಿವರಿಸುವಾಗ ಶೀತಮಾರುತದ ಅಥವಾ ಮೋಡದ ಕಲ್ಪನೆ, ಪಿತ್ತಕ್ಕೆ ಆಮ್ಲಗಳ ಕಲ್ಪನೆ, ಕಫಕ್ಕೆ ಜಿಗುಟು ದ್ರವ್ಯದ (ಸಿಂಬಳದಂತ) ಕಲ್ಪನೆ ಮಾಡಬಹುದು. ಆದರೆ ಅದನ್ನೇ ಅಂತಿಮ ಎಂದುಕೊಳ್ಳುವುದು ಮಾತ್ರ ಸಲ್ಲದು. ಏಕೆಂದರೆ, ಕೆಲವು ಸಂದರ್ಭಗಳಲ್ಲಿ ಬೇರೆ ಬೇರೆಯಾಗಿ ಅವು ವರ್ತಿಸಬಹುದು.

ವಾತದ ಸಾಮಾನ್ಯ ಗುಣಗಳೆಂದರೆ ಶೀತತೆ (ತಂಪು), ರೂಕ್ಷತೆ (ಒಣ ಸ್ವಭಾವ), ಲಘುತ್ವ (ಹಗುರ), ಖರತ್ವ (ಒರಟು), ಸೂಕ್ಷ್ಮತ್ವ (ಕಣರೂಪಿ) ಮತ್ತು ಚಲತ್ವ (ಸದಾ ಚಲಿಸುವುದು). ಹಾಗಾಗಿ ವಾತದ ಪ್ರಾಧಾನ್ಯವಿದ್ದಾಗ ಈ ಗುಣಗಳ ಆಧಿಕ್ಯ ಕಂಡುಬರುತ್ತದೆ.

ವಾತವು ಪ್ರಮುಖವಾಗಿ ನಾಭಿಯ ಕೆಳಭಾಗದಲ್ಲಿ ಮೂಲವನ್ನು ಹೊಂದಿರುತ್ತದೆ. ಅಲ್ಲದೆ, ಪ್ರಮುಖವಾಗಿ ದೊಡ್ಡಕರುಳು, ಕಟಿಭಾಗ, ತೊಡೆಗಳು, ಕಿವಿಗಳು, ಮೂಳೆಗಳು ಮತ್ತು ಚರ್ಮದಲ್ಲಿ ಆಶ್ರಿತವಾಗಿರುತ್ತದೆ. ಇನ್ನೂ ಸುಲಭವಾಗಿ ಹೇಳುವುದಾದರೆ  ವಾತವು ಬಸ್ಸಿನಂತೆ ಎಲ್ಲೆಡೆಯಲ್ಲಿ ಇದ್ದು, ಚಲಿಸುತ್ತಿದ್ದರೂ ಈ ಸ್ಥಾನಗಳು ಬಸ್ ನಿಲ್ದಾಣಗಳಂತೆ ಮತ್ತು ನಾಭಿಯ ಕೆಳಭಾಗ ಅಥವಾ ದೊಡ್ಡಕರುಳೆಂಬುದು ಬಸ್ ಡಿಪೊ ಇದ್ದಂತೆ. 🙂

ವಾತವು ಪ್ರಾಣ, ಉದಾನ, ವ್ಯಾನ, ಸಮಾನ ಮತ್ತು ಅಪಾನ ವಾತಗಳೆಂದು ೫ ಬಗೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರತಿಯೊಂದಕ್ಕೂ ಅದರದ್ದೇ ಆದ ಸ್ಥಾನ, ಕಾರ್ಯಗಳು ಇವೆ. ಅವುಗಳನ್ನೆಲ್ಲ ವಿವರಿಸುವುದು ಅನಗತ್ಯ ಗೊಂದಲಗಳನ್ನುಂಟು ಮಾಡಬಹುದು ಮತ್ತು ಅತಿ ವಿಸ್ತೃತವಾಗಬಹುದೆಂದು ಇಲ್ಲಿ ಹೇಳುತ್ತಿಲ್ಲ.

ವಾತದ ಕೆಲವು ಕೆಲಸಗಳನ್ನು ಹೇಳುವುದಾದರೆ, ಉಸಿರಾಟದ ನಿಯಂತ್ರಣ, ಜೀರ್ಣಾಂಗಗಳ ಚಲನೆ, ಸಂಜ್ಞೆಗಳ ಗ್ರಹಿಕೆ, ಮಲ ವಿಸರ್ಜನೆ, ಶಿಶುವಿನ ಜನನಕ್ರಿಯೆ, ಅಂಗವ್ಯೂಹಗಳ ನಿಯಂತ್ರಣ ಮತ್ತು ಸಂಯೋಜನೆ, ಮಾಂಸಖಂಡಗಳ ಸಂಯೋಜಿತ ಚಲನೆ ಹೀಗೆ ಹತ್ತು ಹಲವು.

ವಾತವು ಅತಿಯಾಗಿ ಹೆಚ್ಚಾದರೆ (ಪ್ರಕೋಪ) ದೌರ್ಬಲ್ಯ, ಚರ್ಮದ/ಅಂಗಾಂಗಗಳ ಒಣಗುವಿಕೆ, ವಿಕೃತ ಚಲನೆ (ಅಪಸ್ಮಾರದಂತೆ), ವಿವಿಧ ನೋವುಗಳು, ಕೃಶತ್ವ, ಶರೀರದ ಕಪ್ಪಾಗುವಿಕೆ, ಉಷ್ಣದ ಬಯಕೆ, ಹೊಟ್ಟೆ ಉಬ್ಬರ, ಮಲಬದ್ಧತೆ, ನಿದ್ರಾಹೀನತೆ, ಪ್ರಲಾಪ (ಅರ್ಥರಹಿತ ಮಾತುಗಳು), ತಲೆತಿರುಗುವಿಕೆ ಇತ್ಯಾದಿಗಳು ಕಂಡುಬರುತ್ತವೆ.

ವಾತವು ತುಂಬಾ ಕಡಿಮೆಯಾದರೆ ಮೈಭಾರ, ಮಾತು ಕಡಿಮೆಯಾಗುವಿಕೆ, ಸಂಜ್ಞಾಗ್ರಹಿಕೆಯ ಕಡಿಮೆಯಾಗುವಿಕೆ ಇತ್ಯಾದಿಗಳು ಕಂಡುಬರುತ್ತವೆ. ಸಾಮಾನ್ಯವಾಗಿ ವಾತ ಮತ್ತು ಕಫಗಳು ಒಂದಕ್ಕೊಂದು ವಿರುದ್ಧವಾಗಿ ವರ್ತಿಸುತ್ತವೆ.

ಒಂದು ಚಿಕ್ಕ ಉದಾಹರಣೆ ಕೊಡುವುದಾದರೆ, ವಾತವು ಸರಿಯಾಗಿ (ಪ್ರಾಕೃತವಾಗಿ) ಇರುವಾಗ ಮಾಂಸಖಂಡಗಳು ಸರಿಯಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಆಕೃತಿಯನ್ನು ಹೊಂದಿರುತ್ತವೆ. ಆದರೆ ಅತಿಯಾಗಿ ಕುಪಿತಗೊಂಡಾಗ ಅಪಸ್ಮಾರದಂತಹ ಚಲನೆ ಅಥವಾ ಮಾಂಸಖಂಡಗಳ ಕೃಶತ್ವ ಕಂಡುಬರಬಹುದು. ಹಾಗೆಯೇ ವಾತವು ಕಡಿಮೆಯಾದಾಗ ಕುಂಠಿತ ಚಲನೆಯುಂಟಾಗಬಹುದು ಅಥವಾ ಚಲನೆಯೇ ಇಲ್ಲದಾಗಬಹುದು.

ಹೀಗೆಯೇ ಮುಂದಿನ ಸಂಚಿಕೆಯಲ್ಲಿ ಪಿತ್ತವನ್ನು ತಿಳಿದುಕೊಳ್ಳೋಣ. ನಮಸ್ಕಾರ.

ಆಯುರ್ವೇದ ಅರಿವು ಮಾಲಿಕೆ-೭

22 09 2009

ನಮ್ಮ ಬದುಕಿಗೆ ’ದೋಷಗಳು’ ಬೇಕು….!

ಇದೇನು ಹೇಳುತ್ತಿದ್ದೀರಿ ಎನ್ನುತ್ತೀರಾ? ಆಧ್ಯಾತ್ಮದ ಬಗ್ಗೆ ಹೇಳುತ್ತಿದ್ದೇನೆ ಅಂದುಕೊಂಡಿರಾ? ಯಾವುದೂ ಅಲ್ಲ, ಆಯುರ್ವೇದವನ್ನೇ ಹೇಳುತ್ತಿದ್ದೇನೆ….

ಹಿಂದಿನ ಸಂಚಿಕೆಯಲ್ಲಿ ಹೇಳಿದ ಮಹಾಭೂತಗಳು ಬಹುಶಃ ರಚನಾತ್ಮಕವಾಗಿ ಕಾರ್ಯ ಮಾಡಿದರೆ, ಈ ದೋಷಗಳು ಕ್ರಿಯಾತ್ಮಕವಾದವು. ನಮ್ಮ ದೇಹ ಪ್ರಕೃತಿ, ಆರೋಗ್ಯದ ಪಾಲನೆ, ಜೈವಿಕ ಕ್ರಿಯೆಗಳು ಮತ್ತು ಅನಾರೋಗ್ಯ ಇವೆಲ್ಲವೂ ಪ್ರಮುಖವಾಗಿ ದೋಷಗಳನ್ನೇ ಅವಲಂಬಿಸಿವೆ. ಆ ದೋಷಗಳು ಮಹಾಭೂತಗಳ ಸೂಕ್ಷ್ಮ ಹಾಗೂ ಕ್ರಿಯಾಭಾಗಗಳ ಸಂಯೋಗದಿಂದಲೇ ಆಗಿವೆ. ಅದು ಈ ಕೆಳಗಿನಂತೆ,

೧. ವಾತದೋಷ: ವಾಯು + ಆಕಾಶ

೨. ಪಿತ್ತದೋಷ: ಅಗ್ನಿ + ಜಲ

೩. ಕಫದೋಷ: ಜಲ + ಪೃಥ್ವಿ

ಈ ಮೇಲಿನ ದೋಷಗಳು ಆಯುರ್ವೇದದ ಎಲ್ಲಾ ಬಗೆಯ ಚಿಕಿತ್ಸೆ, ಸಲಹೆ, ಕ್ರಮಗಳಿಗೆ ಮೂಲಾಧಾರಗಳು. ಅವುಗಳನ್ನು ಅರ್ಥಮಾಡಿಕೊಳ್ಳದೆ ಆಯುರ್ವೇದದ ಪ್ರಯೋಗ ನಿರರ್ಥಕ ಅಥವಾ ಕತ್ತಲಲ್ಲಿ ಕಲ್ಲು ಹೊಡೆದಂತೆ !

ಇಷ್ತೆಲ್ಲ ಮಹತ್ತ್ವದ ಇವುಗಳನ್ನು ದೋಷ ಎಂದು ಹೇಳುವುದೇಕೆ?

ಪ್ರಕೃತಿರಾರಂಭಕತ್ವೇ ಸತಿ ಸ್ವತಂತ್ರೇಣ ದುಷ್ಟಿಕರ್ತೃತ್ವಂ ದೋಷತ್ವಂ

ಎಂದು ಗ್ರಂಥಗಳಲ್ಲಿ ಹೇಳಿದ್ದಾರೆ. ಅಂದರೆ ಯಾವುದಕ್ಕೆ ದೇಹಪ್ರಕೃತಿಯನ್ನು ಉಂಟುಮಾಡುವ ಶಕ್ತಿಯಿದೆಯೋ ಹಾಗೂ ತನ್ನಷ್ಟಕ್ಕೆ ಏನನ್ನೂ ಅವಲಂಬಿಸದೆ ದೇಹದ ದೂಷಣೆ ಮಾಡುವ ಶಕ್ತಿಯಿದೆಯೋ ಅದು ದೋಷವು.

ದೋಷಗಳನ್ನು ದೂಷಣೆಮಾಡುವ ಸ್ವಭಾವದಿಂದಲೇ ಗುರುತಿಸುವುದರಿಂದ ಈ ಹೆಸರು. ಅವು ಪ್ರಾಕೃತಿಕ ಕೆಲಸಗಳನ್ನು ಮಾಡುವಾಗ ಹಲವು ಬಾರಿ ’ಧಾತು’ (ದೇಹಕ್ಕೆ ಆಧಾರ) ಗಳೆಂದೇ  ಕರೆಯಲಾಗುತ್ತದೆ. ಆದರೂ, ದೂಷಣೆಯಾಗಲು ಅವುಗಳು ಅತ್ಯಗತ್ಯವಾದುದರಿಂದ ದೋಷವೆಂಬುದೇ ಅತಿ ಸೂಕ್ತವಾಯಿತು. ಅಲ್ಲದೆ, ಅವುಗಳ ಇರುವಿಕೆಯೂ ಕೂಡ ದೂಷಣೆಯುಂಟಾದಾಗಲೇ ಹೆಚ್ಚಾಗಿ ಅರಿವಾಗುವುದು.

ಇಲ್ಲಿ ದೂಷಣೆಯೆಂದರೆ, ಹಾಳುಮಾಡುವುದು ಎಂದಂತೆ. ಅಂದರೆ ಸಹಜ ಮತ್ತು ಆರೋಗ್ಯಕರ ಕ್ರಿಯೆಗಳ ಏರುಪೇರು. ಇದರಿಂದ ತಾತ್ಕಾಲಿಕವಾದ ತೊಂದರೆಗಳು ಅಥವಾ ದೀರ್ಘಕಾಲೀನ / ಗಂಭೀರ ತೊಂದರೆ (ಖಾಯಿಲೆ) ಗಳು ಉಂಟಾಗುತ್ತವೆ. ಹಾಗಾದರೆ ಅವು ದೋಷಗಳು ಸರಿ ತಾನೆ?

ದೋಷಗಳ ಗುಣ-ಧರ್ಮಗಳು ಇತ್ಯಾದಿಗಳನ್ನು ಮುಂದೆ ವಿವರಿಸುತ್ತೇನೆ. ನಮಸ್ಕಾರ 🙂