ಆಯುರ್ವೇದ ಅರಿವು ಮಾಲಿಕೆ-೭

22 09 2009

ನಮ್ಮ ಬದುಕಿಗೆ ’ದೋಷಗಳು’ ಬೇಕು….!

ಇದೇನು ಹೇಳುತ್ತಿದ್ದೀರಿ ಎನ್ನುತ್ತೀರಾ? ಆಧ್ಯಾತ್ಮದ ಬಗ್ಗೆ ಹೇಳುತ್ತಿದ್ದೇನೆ ಅಂದುಕೊಂಡಿರಾ? ಯಾವುದೂ ಅಲ್ಲ, ಆಯುರ್ವೇದವನ್ನೇ ಹೇಳುತ್ತಿದ್ದೇನೆ….

ಹಿಂದಿನ ಸಂಚಿಕೆಯಲ್ಲಿ ಹೇಳಿದ ಮಹಾಭೂತಗಳು ಬಹುಶಃ ರಚನಾತ್ಮಕವಾಗಿ ಕಾರ್ಯ ಮಾಡಿದರೆ, ಈ ದೋಷಗಳು ಕ್ರಿಯಾತ್ಮಕವಾದವು. ನಮ್ಮ ದೇಹ ಪ್ರಕೃತಿ, ಆರೋಗ್ಯದ ಪಾಲನೆ, ಜೈವಿಕ ಕ್ರಿಯೆಗಳು ಮತ್ತು ಅನಾರೋಗ್ಯ ಇವೆಲ್ಲವೂ ಪ್ರಮುಖವಾಗಿ ದೋಷಗಳನ್ನೇ ಅವಲಂಬಿಸಿವೆ. ಆ ದೋಷಗಳು ಮಹಾಭೂತಗಳ ಸೂಕ್ಷ್ಮ ಹಾಗೂ ಕ್ರಿಯಾಭಾಗಗಳ ಸಂಯೋಗದಿಂದಲೇ ಆಗಿವೆ. ಅದು ಈ ಕೆಳಗಿನಂತೆ,

೧. ವಾತದೋಷ: ವಾಯು + ಆಕಾಶ

೨. ಪಿತ್ತದೋಷ: ಅಗ್ನಿ + ಜಲ

೩. ಕಫದೋಷ: ಜಲ + ಪೃಥ್ವಿ

ಈ ಮೇಲಿನ ದೋಷಗಳು ಆಯುರ್ವೇದದ ಎಲ್ಲಾ ಬಗೆಯ ಚಿಕಿತ್ಸೆ, ಸಲಹೆ, ಕ್ರಮಗಳಿಗೆ ಮೂಲಾಧಾರಗಳು. ಅವುಗಳನ್ನು ಅರ್ಥಮಾಡಿಕೊಳ್ಳದೆ ಆಯುರ್ವೇದದ ಪ್ರಯೋಗ ನಿರರ್ಥಕ ಅಥವಾ ಕತ್ತಲಲ್ಲಿ ಕಲ್ಲು ಹೊಡೆದಂತೆ !

ಇಷ್ತೆಲ್ಲ ಮಹತ್ತ್ವದ ಇವುಗಳನ್ನು ದೋಷ ಎಂದು ಹೇಳುವುದೇಕೆ?

ಪ್ರಕೃತಿರಾರಂಭಕತ್ವೇ ಸತಿ ಸ್ವತಂತ್ರೇಣ ದುಷ್ಟಿಕರ್ತೃತ್ವಂ ದೋಷತ್ವಂ

ಎಂದು ಗ್ರಂಥಗಳಲ್ಲಿ ಹೇಳಿದ್ದಾರೆ. ಅಂದರೆ ಯಾವುದಕ್ಕೆ ದೇಹಪ್ರಕೃತಿಯನ್ನು ಉಂಟುಮಾಡುವ ಶಕ್ತಿಯಿದೆಯೋ ಹಾಗೂ ತನ್ನಷ್ಟಕ್ಕೆ ಏನನ್ನೂ ಅವಲಂಬಿಸದೆ ದೇಹದ ದೂಷಣೆ ಮಾಡುವ ಶಕ್ತಿಯಿದೆಯೋ ಅದು ದೋಷವು.

ದೋಷಗಳನ್ನು ದೂಷಣೆಮಾಡುವ ಸ್ವಭಾವದಿಂದಲೇ ಗುರುತಿಸುವುದರಿಂದ ಈ ಹೆಸರು. ಅವು ಪ್ರಾಕೃತಿಕ ಕೆಲಸಗಳನ್ನು ಮಾಡುವಾಗ ಹಲವು ಬಾರಿ ’ಧಾತು’ (ದೇಹಕ್ಕೆ ಆಧಾರ) ಗಳೆಂದೇ  ಕರೆಯಲಾಗುತ್ತದೆ. ಆದರೂ, ದೂಷಣೆಯಾಗಲು ಅವುಗಳು ಅತ್ಯಗತ್ಯವಾದುದರಿಂದ ದೋಷವೆಂಬುದೇ ಅತಿ ಸೂಕ್ತವಾಯಿತು. ಅಲ್ಲದೆ, ಅವುಗಳ ಇರುವಿಕೆಯೂ ಕೂಡ ದೂಷಣೆಯುಂಟಾದಾಗಲೇ ಹೆಚ್ಚಾಗಿ ಅರಿವಾಗುವುದು.

ಇಲ್ಲಿ ದೂಷಣೆಯೆಂದರೆ, ಹಾಳುಮಾಡುವುದು ಎಂದಂತೆ. ಅಂದರೆ ಸಹಜ ಮತ್ತು ಆರೋಗ್ಯಕರ ಕ್ರಿಯೆಗಳ ಏರುಪೇರು. ಇದರಿಂದ ತಾತ್ಕಾಲಿಕವಾದ ತೊಂದರೆಗಳು ಅಥವಾ ದೀರ್ಘಕಾಲೀನ / ಗಂಭೀರ ತೊಂದರೆ (ಖಾಯಿಲೆ) ಗಳು ಉಂಟಾಗುತ್ತವೆ. ಹಾಗಾದರೆ ಅವು ದೋಷಗಳು ಸರಿ ತಾನೆ?

ದೋಷಗಳ ಗುಣ-ಧರ್ಮಗಳು ಇತ್ಯಾದಿಗಳನ್ನು ಮುಂದೆ ವಿವರಿಸುತ್ತೇನೆ. ನಮಸ್ಕಾರ :)





ಆಯುರ್ವೇದ ಅರಿವು ಮಾಲಿಕೆ-೬

15 09 2009

ಆಯುರ್ವೇದದಲ್ಲಿ ಪಂಚಮಹಾಭೂತಗಳು…!

ಆಯುರ್ವೇದದಲ್ಲಿ ಭಾರತೀಯ ದರ್ಶನಗಳಲ್ಲಿ ಹೇಳಿದ ರೀತಿಯಲ್ಲಿ ಸೃಷ್ಟಿಕ್ರಮವನ್ನು ವಿವರಿಸಲಾಗಿದೆ. ಅದರಲ್ಲಿ ಪುರುಷನನ್ನು (ಜೀವಿ ಎಂಬ ಅರ್ಥದಲ್ಲಿ ಪುರುಷ ಎನ್ನುತ್ತಾರೆ, ಲಿಂಗ ಸೂಚಕವಲ್ಲ) ೨೪ ಅಥವಾ ೨೫ ಅಂಶಗಳಿಂದ ಉಂಟಾದದ್ದೆಂದು ವಿವರಿಸಲಾಗಿದೆ. ಅವುಗಳಲ್ಲಿ ಭೌತಿಕವಾದ ಈ ಶರೀರಕ್ಕೆ ಕಾರಣವಾಗುವುದು ಪಂಚಮಹಾಭೂತಗಳ ಸಮೂಹ. ಇಲ್ಲಿ ಪಂಚಮಹಾಭೂತವೆಂದರೆ ೫ ಬಗೆಯ ಮೂಲದ್ರವ್ಯಗಳು. ಅವೆಂದರೆ, ಪೃಥ್ವಿ-ಅಪ್-ತೇಜ-ವಾಯು-ಆಕಾಶಗಳು. ಇವುಗಳನ್ನು ಗುಣಾತ್ಮಕವಾಗಿ ತಿಳಿಯಬೇಕೆ ಹೊರತು ಯಥಾವತ್ ಕಲ್ಪನೆ ಸಲ್ಲದು. ಸರಳವಾಗಿ ಅರ್ಥಪಡಿಸಲು ಈ ಕೆಳಗಿನಂತೆ ನಮ್ಮದೇ ಶರೀರದ ಉದಾಹರಣೆಯ ಸಹಿತ ವಿವರಿಸಲು ಪ್ರಯತ್ನಿಸಿದ್ದೇನೆ.

೧. ಪೃಥ್ವಿ (ಭೂಮಿ)- ಮೂಳೆ ಮುಂತಾದ ದೇಹದಲ್ಲಿನ ಘನ/ಗಟ್ಟಿ ಪದಾರ್ಥಗಳು.

೨. ಅಪ್ (ಜಲ)- ದೇಹದಲ್ಲಿನ ದ್ರವವಸ್ತುಗಳು (ಜೊಲ್ಲು, ಕಣ್ಣೀರು, ದುಗ್ಧರಸ ಇತ್ಯಾದಿ)

೩. ತೇಜ (ಅಗ್ನಿ)- ದೇಹದ ಉಷ್ಣತೆ, ಶಕ್ತಿ, ಚಯಾಪಚಯ ಕ್ರಿಯೆಗಳು ಇತ್ಯಾದಿ.

೪. ವಾಯು (ಗಾಳಿ)- ಉಸಿರು, ಕರುಳಿನ ವಾಯು, ಚಲನಾತ್ಮಕತೆ, ಜಲಜನಕ ಮುಂತಾದ ಅನಿಲಗಳು ಇತ್ಯಾದಿ.

೫. ಆಕಾಶ (ನಿರ್ವಾತ)- ದೇಹದ ಪೊಟರೆಗಳು, ರಂಧ್ರಗಳು ಇತ್ಯಾದಿ.

ಈ ಮಹಾಭೂತಗಳು ಯಾವ ಪ್ರಮಾಣದಲ್ಲಿ ಸಂಯೋಗ ಹೊಂದಿವೆ, ಯಾವ ಬಂಧದಲ್ಲಿ ಸೇರಿವೆ ಇತ್ಯಾದಿಗಳನ್ನನುಸರಿಸಿ ದ್ರವ್ಯಗಳ ಗುಣ-ಸ್ವಭಾವಗಳು ವ್ಯತ್ಯಾಸವಾಗುತ್ತವೆ. ಉದಾ: ಮೇಲಿನಂತೆ ಹೇಳುವುದಾದರೆ ಪೃಥ್ವಿ ಮತ್ತು ಜಲದ ಸಂಯೋಗದಿಂದ ಮಾಂಸವು ಉತ್ಪತ್ತಿಯಾಗಿದೆ ಎನ್ನಬಹುದು. ಇಲ್ಲಿ ಪ್ರತಿಯೊಂದು ದ್ರವ್ಯದಲ್ಲೂ ಎಲ್ಲಾ ಮಹಾಭೂತಗಳಿದ್ದರೂ ಪ್ರಧಾನವಾದವನ್ನು ಮಾತ್ರ ಮುಖ್ಯದ್ರವ್ಯಗಳಾಗಿ ಪರಿಗಣಿಸಲಾಗುತ್ತದೆ.

ಈ ಮಹಾಭೂತ ಸಂಯೋಗವು ನಮ್ಮಲ್ಲಿ ಮಾತ್ರವಲ್ಲ, ಸಮಸ್ತ ವಿಶ್ವದ ದ್ರವ್ಯಗಳಲ್ಲೆಲ್ಲ ಇದೆ. ಹಾಗಾಗಿಯೇ ಆಹಾರದಲ್ಲಾಗಲೀ, ಔಷಧದಲ್ಲಾಗಲೀ ಪ್ರಕೃತಿಯಿಂದ ಪಡೆದದ್ದನ್ನು ದೇಹಕ್ಕೆ ಸೇರಿಸಿ ಪ್ರಯೋಜನ ಪಡೆಯಲು ಸಾಧ್ಯವಾಗುವುದು. ಅಷ್ಟೇ ಅಲ್ಲ ನಮ್ಮ ದೇಹವು ಪರಿಸರದ, ಪ್ರಕೃತಿಯ ಬದಲಾವಣೆಗಳಿಗೆ ಸ್ಪಂದಿಸುವುದೂ ಇದೇ ಕಾರಣಕ್ಕೆ…!

ಈಗ ತಿಳಿಯಿತಲ್ಲಾ ನಮ್ಮ ಅಂತರಾಳದ ರಹಸ್ಯ? ಮುಂದೆ ಇನ್ನೂ ಇದೆ ತಿಳಿಸಲು….ಅಲ್ಲಿಯವರೆಗೆ…ಮನನ ಮಾಡುತ್ತಿರಿ, ಹೋಗಿ ಬರುತ್ತೇನೆ. :)





ಆಯುರ್ವೇದ ಅರಿವು ಮಾಲಿಕೆ-೫

8 09 2009

ಆಯುರ್ವೇದ ಬಳಕೆ ಏಕೆ, ಹೇಗೆ ಮತ್ತು ಎಲ್ಲಿ?

ಮೊದಲೇ ಹೇಳಿದಂತೆ ಆಯುರ್ವೇದದ ಹರವು ಅಪಾರ. ಹಾಗಾಗಿ ಪ್ರಸ್ತುತ ಪರಿಸ್ಥಿತಿಯಲ್ಲಿ ಆಯುರ್ವೇದದ ಬಳಕೆಯ ಬಗ್ಗೆ ಸ್ವಲ್ಪ ಮಾಹಿತಿ ಕೊಡುವ ಪ್ರಯತ್ನ ಮಾಡುತ್ತೇನೆ.

ಏಕೆ?

ಆಯುರ್ವೇದದ ಪ್ರಯೋಜನ ಕೇವಲ ರೋಗಿಗೆ ಮಾತ್ರ ಅಲ್ಲ. ಆದ ಕಾರಣ ಇದನ್ನು ಪ್ರತಿಯೊಬ್ಬರೂ ಬಳಸಬಹುದು ಅಥವಾ ಬಳಸಬೇಕು. ಏಕೆಂದರೆ ಆರೋಗ್ಯಕರ ಜೀವನದ ಶಾಸ್ತ್ರವಾಗಿರುವುದರಿಂದ ನಮ್ಮ ನಿತ್ಯ ಜೀವನದಲ್ಲಿ ಇದರ ಅಳವಡಿಕೆಯಿಂದ ಆರೋಗ್ಯ ಉತ್ತಮಗೊಳ್ಳುವುದು ಮತ್ತು ಉತ್ಪಾದಕವಾದ ದೀರ್ಘ ಜೀವನವನ್ನೂ ನಡೆಸಬಹುದು. ಉದಾ: ಇದರಲ್ಲಿ ವಿವರಿಸಿದಂತೆ ದಿನಚರಿಯನ್ನು ನಡೆಸಿದಲ್ಲಿ ಅನೇಕ ರೋಗಗಳು ನಮ್ಮ ಬಳಿ ಸುಳಿಯುವುದಿಲ್ಲ ಮತ್ತು ದೇಹದ ರೋಗನಿರೋಧಕ ಶಕ್ತಿಯು ಉತ್ತಮಗೊಂಡು, ಮನಸ್ಸು ಉಲ್ಲಸಿತವಾಗಿದ್ದು ದಿನೇ ದಿನೇ ಆರೋಗ್ಯ ವೃದ್ಧಿಯಾಗುತ್ತದೆ. ಹಾಗೆಯೇ ಉತ್ತಮ ಆಹಾರ ಪದ್ಧತಿ, ಕಾಲ ಕಾಲಕ್ಕೆ ದೇಹಶುದ್ಧಿಯ ಕ್ರಮಗಳು, ರೋಗಗಳು ಮತ್ತು ಅವುಗಳ ಚಿಕಿತ್ಸೆ ಇತ್ಯಾದಿಗಳನ್ನೂ ವಿಸ್ತೃತವಾಗಿ ವಿವರಿಸಿರುವುದರಿಂದ ಸಹಜ ಮತ್ತು ಪ್ರಾಕೃತಿಕವಾದ ಈ ವಿಧಾನಗಳನ್ನು ಬಳಸಿ ದೇಹಕ್ಕೆ ಹಾನಿ ಮಾಡದೇ ಪ್ರಯೋಜನವನ್ನು ಪಡೆಯಬಹುದು.

ಹೇಗೆ ಮತ್ತು ಎಲ್ಲಿ?

ಆಯುರ್ವೇದವನ್ನು ನಾನಾ ರೀತಿಗಳಲ್ಲಿ ಬಳಸಬಹುದು. ನಿತ್ಯ ಜೀವನದಲ್ಲಿ ದಿನಚರಿ, ಆಹಾರ ಪದಾರ್ಥಗಳನ್ನು ತಿಳಿದುಕೊಳ್ಳಲು, ಆರೋಗ್ಯಕರ ಅಡುಗೆಯ ಪದ್ಧತಿ, ಆಹಾರಸೇವನಾಕ್ರಮ, ಋತುಚರ್ಯೆ, ಗರ್ಭಿಣಿ-ಬಾಣಂತಿ ಉಪಚಾರ, ಬಾಲೋಪಚಾರ, ಮನೆಮದ್ದು ಇತ್ಯಾದಿಗಳನ್ನು ಆಯುರ್ವೇದ ರೀತ್ಯಾ ತಿಳಿದುಕೊಂಡು ಪಾಲಿಸಿದಲ್ಲಿ ಸುಲಭವಾಗಿ ಮನೆಯಲ್ಲಿಯೇ ಹೆಚ್ಚು ಖರ್ಚಿಲ್ಲದೆ ಆರೋಗ್ಯದ ರಕ್ಷಣೆ ಮತ್ತು ವೃದ್ಧಿಯಾಗುತ್ತದೆ.

ಖಾಯಿಲೆಗಳ ಚಿಕಿತ್ಸೆಗೆ ಕೆಲವಷ್ಟು ಮನೆಮದ್ದುಗಳು ಉಪಯೋಗವಾದರೆ ಇನ್ನು ಹಲವು ಸಲ ಸರಿಯಾಗಿ ಕಲಿತ ವೈದ್ಯರ ಬಳಿ ಹೋಗುವುದು ಒಳಿತು. ಆಯುರ್ವೇದ ವೈದ್ಯರು ಮೂಲಿಕೆ ಮತ್ತು ಖನಿಜಗಳಿಂದ ತಯಾರಿಸಿದ ಬಗೆ ಬಗೆಯ ಔಷಧಗಳನ್ನು ನೀಡಿ ಅಥವಾ ದೇಹಶುದ್ದಿಯ ’ಪಂಚಕರ್ಮ’ ಪ್ರಯೋಗ ಮಾಡಿ ಅಥವಾ ಇವುಗಳ ಒಟ್ಟು ಪ್ರಯೋಗದಿಂದ, ಆಹಾರ ಮತ್ತು ಇತರೆ ನಿಯಮಗಳನ್ನು ಜೊತೆಗೊಳಿಸಿ ಚಿಕಿತ್ಸೆ ನೀಡುವರು. ಆಯುರ್ವೇದವು ಅನೇಕ ಬಗೆಯ ದೈಹಿಕ ಹಾಗೂ ಮಾನಸಿಕ ಖಾಯಿಲೆಗಳಿಗೆ ಉಪಯೋಗವಾಗುತ್ತದೆ. ಅದರಲ್ಲೂ ದೀರ್ಘಕಾಲೀನ ರೋಗಗಳಲ್ಲಿ ಬಹಳ ಕಾಲ ಬಳಸಿದರೂ ತೊಂದರೆಯಿಲ್ಲವಾದ ಕಾರಣ ಬಹು ಉಪಯುಕ್ತವಾಗಿದೆ.

ಕೆಲವು ತುರ್ತುಸ್ಥಿತಿಗಳಲ್ಲಿ ಔಷಧ ಪರಿಣಾಮ ತೋರುತ್ತಿಲ್ಲವೆಂದು ಕಂಡರೆ ಅಥವಾ ಖಾಯಿಲೆ ತೀವ್ರವಾಗುತ್ತಿರುವಾಗ ನಿರ್ಲಕ್ಷ್ಯ ಸಲ್ಲದು. ಆಗ ಅಗತ್ಯ ಬಿದ್ದಲ್ಲಿ ವೈದ್ಯರು ಇತರೆ ಚಿಕಿತ್ಸೆಗಳ, ಆಸ್ಪತ್ರೆಗಳ ಸಹಾಯ ಪಡೆಯಲು ತಿಳಿಸುವರು. ಆಯುರ್ವೇದವು ಬಹು ಉಪಯೋಗಿಯಾದರೂ, ನಮ್ಮ ಅಲ್ಪಮತಿಗೆ ನಿಲುಕದ ಹಲವಷ್ಟು ವಿಚಾರಗಳು ಇನ್ನೂ ಸಂಶೋಧನೆಗೊಳ್ಲುತ್ತಲೇ ಇವೆ ಮತ್ತು ನಮ್ಮ ಅರಿವನ್ನು ವಿಸ್ತರಿಸುವ ಪ್ರಯತ್ನಗಳು ನಡೆಯುತ್ತಲೇ ಇವೆ. ಹಾಗಾಗಿ ಅಂಥ ಸಂದರ್ಭಗಳಲ್ಲಿ, ಅಗತ್ಯವಿರುವಾಗ ಆಧುನಿಕ ಪದ್ಧತಿಯ ಸಹಾಯ ಪಡೆಯುವುದರಲ್ಲಿ ತಪ್ಪಿಲ್ಲ. ಪದ್ಧತಿ ಯಾವುದಾದರೂ ರೋಗಿಯ ಜೀವ ರಕ್ಷಣೆಯೇ ಪರಮ ಗುರಿ. ಇದು ಆಯುರ್ವೇದ ಮಾತ್ರವಲ್ಲ, ಎಲ್ಲ ಚಿಕಿತ್ಸಾ ಪದ್ಧತಿಗಳಿಗೂ ಇರುವ ಕಟ್ಟುಪಾಡು. ಕೆಲವು ಖಾಯಿಲೆಗಳಿಗೆ ಕೆಲವು ಪದ್ಧತಿಯು ಪರಿಣಾಮಕಾರಿ ಮತ್ತು ಸೂಕ್ತ, ಎಲ್ಲವೂ, ಎಲ್ಲದಕ್ಕೂ ಅಲ್ಲ.

ಇನ್ನು ಮನಸ್ಸು ಮತ್ತು ದೇಹದ ಶ್ರಮ ನಿವಾರಣೆ ಮತ್ತು ಒತ್ತಡ ಪರಿಹಾರಕ್ಕಾಗಿ ಆಯುರ್ವೇದ ಚಿಕಿತ್ಸೆಗಳು ಬಹಳಷ್ಟು ಕೇಂದ್ರಗಳಲ್ಲಿ, ಹೋಟೆಲ್-ರೆಸಾರ್ಟ್‍ ಗಳಲ್ಲಿ ಲಭ್ಯ. ಇದನ್ನೂ ಅಲ್ಲಿನ ಸ್ವಚ್ಚತೆ, ದಕ್ಷತೆ ಇತ್ಯಾದಿಗಳನ್ನು ಪರಿಗಣಿಸಿ ಶಕ್ತ್ಯಾನುಸಾರ ಆಗಾಗ್ಗೆ ಬಳಸಬಹುದು. ಆದರೆ ಯಾವುದೇ ಆರೋಗ್ಯ ಸಮಸ್ಯೆಗಳಿದ್ದಲ್ಲಿ ವೈದ್ಯರ ಸಲಹೆ ಪಡೆದೇ ಮುಂದುವರಿಯುವುದು ಒಳಿತು. ಕೆಲವು ಕೇಂದ್ರಗಳಲ್ಲಿ ಅಲ್ಲಿಯದೇ ವೈದ್ಯರೂ ಇರುತ್ತಾರೆ ಮತ್ತು ಅವರು ಚಿಕಿತ್ಸೆಗೆ ಮುನ್ನ ತಪಾಸಣೆ, ಪ್ರಶ್ನೆ ಮಾಡಿ ಸಲಹೆ ನೀಡುತ್ತಾರೆ. ಅದನ್ನು ಬಳಸುವುದು ಒಳಿತು.

ಹೀಗೆ ಹತ್ತು ಹಲವು ಪ್ರಯೋಜನಗಳಿರುವ ಆಯುರ್ವೇದದ ಮೂಲ ಸಿದ್ಧಾಂತಗಳ ಬಗ್ಗೆ ಮುಂದಿನ ದಿನಗಳಲ್ಲಿ ಬೆಳಕು ಚೆಲ್ಲಲಿದ್ದೇನೆ.








Follow

Get every new post delivered to your Inbox.